Mind is like monkey thoughts are like monkeys acts I just try to put these thoughts in to pen. One fine day when I have nothing to do I might sit back and read how I played my monkey mind!!!!!!!!!!!!
Sunday, December 19, 2021
ಪುಟ್ಟಕ್ಕನ ನೆನಪುಗಳು
ಇತ್ತೀಚೆಗೆ ಊರಿಗೆ ಹೋದಾಗ ಕಾಣಾಂರಗಳಿಂದಾಗಿ ನಮ್ಮಜ್ಜಿಯ ಮನೆಗೆ ಹೋಗಬೇಕಾಗಿ ಬಂತು. ಹಿಂದಿನ ಕಾಲದಂತೆ ಫರ್ಲಾಂಗುಗಟ್ಟಲೆ ನಡೆದ ಹೋಗುವ ಅವಶ್ಯಕತೆ ಇಲ್ಲದಿದ್ದರೂ, ಮುಖ್ಯ ರಸ್ತೆಯಿಂದ ಇಳಿದು, ಮಳೆಯ ಕ್ರೌರ್ಯದಿಂದ ಘಾಸಿಗೊಂಡ ಕಚ್ಚಾ ರಸ್ತೆಯ ಸುಮಾರು ಅರ್ಧ ಕಿಲೋಮೀಟರ್ ದೂರದ ಕಾರಿನ ಪ್ರಯಾಣ ಹಳೆಯ ನೆನಪುಗಳನ್ನು ಕದಡಿತು. ವಯಸ್ಸಾದರೂ ಕಣ್ಣಿನ ಸೂಕ್ಷ್ಮತೆ ಕಳೆದುಕೊಳ್ಳದ ನಮ್ಮಮ್ಮ ಕಾರಿನ ಬಳಿಯಲ್ಲಿ ನಡೆದು ಹೋದ ಮುಖವನ್ನು ಗುರುತಿಸಿ 'ಅದು ಅಂಗರನ ಮಗಳು ಗಿರಿಜಾ ಅಲ್ವಾ?' ಅಂದಳು. ನಾನು ಕಾರು ನಿಲ್ಲಿಸಿದೆ, ಅಮ್ಮ ' ಗಿರಿಜಾ' ಎಂದು ಕರೆದಾಗ ಆ ಹೆಂಗಸು 'ಯಾರದು ಕವೇರಮ್ಮನಾ?' ಎನ್ನುತ್ತಾ ಕಾರಿನ ಬಳಿ ಬಂದರು. 'ಹೌದು ಯಾವ ಕಡೆ ಹೋರಟಿದ್ದು? ನೋಡದೆ ಸುಮಾರು ಮೂರು, ನಾಲ್ಕು ವರ್ಷ ಆಗಿರಬೇಕಲ್ವಾ? ಹೇಗಿದ್ದಿ?' ಎಂದೆಲ್ಲ ಪ್ರಶ್ನೆಗಳ ಸರಮಾಲೆ ಬಿಚ್ಚಿದಳು.
"ಹಾಲು ಕೊಡಲು ಮೈಲಿಗಲ್ಲು ಹತ್ತಿರ ಹೋಗಿದ್ದೆ" ಎಂದ ಗಿರಿಜಾಳನ್ನು ಅಮ್ಮ ಕರೆದು ಕಾರಿನಲ್ಲಿ ಕುಳ್ಳಿರಿಸಿಕೊಂಡಳು. ಕಾರು ನಮ್ಮ ಅಜ್ಜನ ಮನೆ ಕಡೆ ಹೊರಟಂತೆ ನೆನಪಿನ ಬುತ್ತಿ ಬಿಚ್ಚಿಕೊಂಡಿತು.
ಅಂಗರ ಪೂಜಾರಿಯ ಮಗಳು ಗಿರಿಜಾ, ಅಮ್ಮನಿಗಿಂತ ಒಂದೆರಡು ವರ್ಷ ಹಿರಿಯಳಾದರೂ, ಊರಿನಲ್ಲಿನ ಪ್ರೈಮರಿ ಶಾಲೆಯಲ್ಲಿ ಐದನೆಯ ತರಗತಿವರೆಗೆ ಒಂದೆ ತರಗತಿಯ ಒಂದೆ ಬೆಂಚಿನಲ್ಲಿ ಒಟ್ಟಿಗೆ ಕುಳಿತು ಕಲಿತರು. ನಮ್ಮಜ್ಜನ ತೋಟದ ಅಂಚಿನಲ್ಲಿರುವ ನೀರಿನ ಕೊಳದಲ್ಲಿ ಒಟ್ಟಿಗೆ ಈಜು ಕಲಿತಿದ್ದರು. ಅಜ್ಜನ ಅಗಾಧ ಆಸ್ತಿಯ ವಿಶಾಲವಾದ ಗುಡ್ಡೆಯ ತುಂಬ ಹರಡಿದ್ದ, ಕುಂಟಲದ ಹಣ್ಣು, ಕರಂಡೆ ಹಣ್ಣು, ಸೂರಿಮುಳ್ಳ ಹಣ್ಣು, ಬೆಲ್ಲ ಹಣ್ಣು, ಕೇಪಳದ ಹಣ್ಣು, ಜೋಗಿ ಹಣ್ಣುಗಳನ್ನು ಯಥೆಚ್ಛ ತಿಂದು ಬೆಳೆದವರು. ನಮ್ಮ ತವರಿಗೆ ಬಂದಾಗಲೆಲ್ಲ ಗಿರಿಜಾಳನ್ನು ಸಂಧಿಸದೆ ಹಿಂತಿರುಗಿದ್ದಿಲ್ಲ. ವಯಸ್ಸಾದಂತೆ ಒಬ್ಬಳೇ ತವರಿಗೆ ಬರುವುದು ಕಮ್ಮಿಯಾಗಿ, ವರ್ಷಕ್ಕೊಮ್ಮೆ ದೀಪಾವಳಿಗೆ ನಾನು ಊರಿಗೆ ಬಂದಾಗ ಕರೆದುಕೊಂಡು ಹೋಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ನನಗೆ ಮಗಳು ಹುಟ್ಟಿ ನಾನು ಊರಿಗೆ ಬರದಾಗ, ಮತ್ತೂಂದು ವರ್ಷ ಬಂದರೂ ಕಾಣಾಂತರಗಳಿಂದ ಎಲ್ಲಿಗೂ ಹೋಗಲಾಗದಾಗ, ಅಮ್ಮ ಗಿರಿಜಾಳನ್ನು ಸಂಧಿಸಿರಲಿಲ್ಲ.
ಅಜ್ಜನೂರಿನಲ್ಲಿ ಯಾರ ಸುದ್ದಿಯೆ ಇರಲಿ ಅದು ನಮ್ಮ ಅಜ್ಜಿ 'ಪುಟ್ಟಕ್ಕನ' ಉಲ್ಲೇಖ ಬರದೆ ಮುಗಿಯಲಾರದು. ನಮ್ಮ ಮಗಳು ಹುಟ್ಟಿ ಆಕೆ ಕಣ್ಣರಳಿಸಿ ನೋಡಿದಾಗ ನನಗೆ ನೆನಪಾಗಿದ್ದು ನಮ್ಮಜ್ಜಿ ಪುಟ್ಟಕ್ಕ. ತಳ್ಳಗೆ ಬೆಳ್ಳಗೆ ಬೊಜ್ಜು ಬಾಯಿಯ ನಮ್ಮಜ್ಜಿಯ ದೇಹದಲ್ಲಿ, ನಾನು ಕಂಡಂತೆ ಇದ್ದಿದ್ದು ಕೇವಲ ಎಲುಬುಗಳು ಮಾತ್ರ. ನಮ್ಮಮ್ಮನಿಗೆ ತಾಯಿಯಾದರೂ ಎಲ್ಲ ಮಕ್ಕಳಿಗೂ ಆಕೆ "ಚಿಕ್ಕ " ಅಥವಾ ಚಿಕ್ಕಮ್ಮ ಆಗಿದ್ದರು. ಕಾರಣ, ಆಕೆ ನಮ್ಮ ಅಜ್ಜನಿಗೆ ಎರಡನೇ ಹೆಂಡತಿ. ಸಣ್ಣ ವಯಸ್ಸಿನ ಮೊದಲ ಹೆಂಡತಿ ನಾಲ್ಕು ಮಕ್ಕಳನ್ನು ಕೈಗಿಟ್ಟು ಕಣ್ಣು ಮುಚ್ಚಿದಾಗ, ನಮ್ಮಜ್ಜಿ ಆ ಮಕ್ಕಳ ಹೂಣೆ ಹೂತ್ತುಕೂಂಡು ತನ್ನ ಸಂಸಾರವಾಗಿ ಮತ್ತೆ ಆರು ಮಕ್ಕಳನ್ನು ಹೆತ್ತು ಹಾಕಿದ್ದರು. ಮೊದಲ ಹೆಂಡತಿಯ ಮಕ್ಕಳು "ಚಿಕ್ಕಿ " ಎಂದು ಕರೆಯುವಾಗ ಸ್ವಂತ ಮಕ್ಕಳಿಗೂ ಅದೆ ರೂಢಿಯಾಯಿತು. ದೊಡ್ಡ ಜಮೀನು ಇದ್ದರೂ ನಮ್ಮಜ್ಜ ಹೆಚ್ಚಿನ ಸಮಯವನ್ನು ತನಗಿಷ್ಟವಾದ ವೈದಿಕ ವೃತ್ತಿಯಲ್ಲೇ ಕಳೆಯುತ್ತಿದ್ದಾಗ, ದೊಡ್ಡ ಬೇಸಾಯ ಮನೆತನದಿಂದ ಬಂದ ನಮ್ಮಜ್ಜಿ ಬೇಸಾಯದ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಆರಂಭದಲ್ಲಿ ಪಕ್ಕದೂರಿನಲ್ಲಿದ್ದ ತನ್ನಣ್ಣನ ಸಹಕಾರ ಪಡೆದರೂ, ಬಹಳ ಬೇಗನೆ ಬೇಸಾಯದ ಸೂಕ್ಷಮತೆಗಳನ್ನು ಅರಿತುಕೊಂಡು ಬಿಟ್ಟಿದ್ದರು.
ಆಕೆಯ ನಿಜನಾಮ ಕಮಲ ಮರೆಯಾಗಿ ಊರಿಗೆಲ್ಲ "ಪುಟ್ಟಕ್ಕ" ಆಗಿದ್ದರು. ನಾಲ್ಕುವರೆ ಅಡಿಯಷ್ಟೇ ಎತ್ತರದ ತೆಳ್ಳಗಿನ ದೇಹದ ಪುಟ್ಟಕ್ಕ ಬಾಯಿ ತುಂಬ ವೀಳ್ಯದೆಲೆ ಹಾಕಿಕೊಂಡು ಕಟ್ಟ ಹುಣಿಯಲ್ಲಿ ಹೊರಟರೆ, ಕೆಲಸದಾಳುಗಳೆಲ್ಲ ಪಂಚಾತಿಗೆ ಬಿಟ್ಟು, ಮೈಮುರಿದು ಕೆಲಸಕ್ಕಿಳಿಯುತ್ತಿದ್ದರು. ಬೆಳ್ಳಗಿನ ಆಕೆಯ ಮೈ ಬಣ್ಣಕ್ಕೆ ವೀಳ್ಯದೆಲೆ ತುಂಬಿದ ನಾಲಿಗೆಯಿಂದ ಸವರಿದ ಕೆಂದುಟಿಗಳು ಆಕೆಯ ಸೌಂದರ್ಯವನ್ನು ವರ್ಧಿಸುತ್ತಿದ್ದುವು. ಈಗ ಕೆಲವೊಮ್ಮೆ ಅನ್ನಿಸುತ್ತದೆ, ಕಡುಗಂದು ಬಣ್ಣದ ನಮ್ಮಜ್ಜನೆಲ್ಲಿ, ಮುಟ್ಟಿದರೆ ರಕ್ತ ಚಿಮ್ಮುವ ಮೈ ಬಣ್ಣದ ಅಜ್ಜಿಯೆಲ್ಲಿ. ಊರಿನ ಜನ ಮಾರು ಹೋಗಿದ್ದು ಆಕೆಯ ನಿಸ್ವಾರ್ಥ ಸ್ವಭಾವಕ್ಕೆ. ಮನೆಗೆ ಬಂದವರು ಏನಾದರೂ ತಿನ್ನದೆ ಉಣ್ಣದೆ ಹಿಂತಿರುಗಿ ಹೋದದ್ದಿಲ್ಲ. ಅಜ್ಜನಂತೂ, ತನ್ನನ್ನು ತಾನು ದಿನವಿಡೀ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿ ಕೂಂಡರೆ, ನಮ್ಮ ಅಜ್ಜಿ, ಆತನ ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಮನೆಯ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು. ಸಕಾಲಕ್ಕೆ ಕೆಲಸ ಕಾರ್ಯಗಳನ್ನು, ಸಮರ್ಪಕವಾಗಿ ಈಡೇರಿಸುವ ಆಕೆಯ ಚಾಕಚಕ್ಯತೆ ಮತ್ತು ಚಾಣಕ್ಯತನ ಆ ದಿನಗಳಲ್ಲಿ ಅರಿವಾಗದಿದ್ದರೂ, ಇಂದು ನೆನೆದರೆ ಆಕೆಯ ಕಾರ್ಯಕ್ಷಮತೆ ಬೆರಗುಗೂಳಿಸುತ್ತದೆ. ಇಂದಿನ ಎಂಬಿಎ ಗಳಂತೆ, ಪವರ್ ಪಾಯಿಂಟ್ಗಳಿಲ್ಲ, ಎಕ್ಸೆಲ್ ಷೀಟ್ಗಳಿಲ್ಲ, ಗೊಣಗಾಟ ಟೆನ್ಷನ್ಗಳಿಲ್ಲ. ಕೈಯಲ್ಲೊಂದು ಕುಡುಗೂಲು, ಬಾಯಿ ತುಂಬ ವೀಳ್ಯ, ಅನುಭವದ ಪಾಠ, ಸಾಧಿಸುವ ಛಲ, ಸೋಲುವ ಭಯವಿಲ್ಲ. ಏಕೆಂದರೆ ಆಕೆಗೆ ಸೋಲು ಒಂದು ಪಾಠ, ಇದು ಪುಸ್ತಕ ಓದಿ ಕಲಿತದ್ದಲ್ಲ, ಬದುಕಿನ ಅನುಭವದಿಂದ ಅರಿತದ್ದು.
ನಮ್ಮ ಅಜ್ಜನ ಮನೆಯ ಎಡಗಡೆ ಇದ್ದ ಒಂದು ಹತ್ತು ಮನೆಗಳವರು ಬಲಗಡೆ ಇದ್ದ ಹದಿನೈದು ಮನೆಗಳಿಗೆ ಹೋಗಬೇಕಾದರೆ, ನಮ್ಮ ಅಜ್ಜನ ಅಂಗಳ ದಾಟಿಕೂಂಡು ಹೂಗಬೇಕು. ಅಂಗಳದ ಅಂಚಿನಲ್ಲಿ ಮುಂದಿಲು. ಮುಂದಿಲಲ್ಲಿ ಬಾವಿಕಟ್ಟೆ, ಬಚ್ಚಲು ಮನೆ, ದೊಡ್ಡ ದನದ ಹಟ್ಟಿ, ಮಧ್ಯೆ ಒಂದು ದಾರಿ ನೇರ ಬಯಲು ಗದ್ದೆ ಕಡೆಗೆ. ಆ ದಾರಿ ಇಕ್ಕೆಲಗಳಲ್ಲಿ ಕುಳಿತುಕೂಳ್ಳಲು ಎತ್ತರದ ಕಟ್ಟೆ. ಆ ಕಟ್ಟೆಯ ಮೇಲೆ ಕುಳಿತುಕೂಂಡರೆ, ತಣ್ಣನೆಯ ಗಾಳಿ ವರ್ಷವಿಡೀ ಬೀಸುತ್ತಿರುತ್ತು. ಆ ಕಟ್ಟೆಯ ಮೇಲೆ ಕುಳಿತು, ಮುಂದೆ ಬಿಚ್ಚಿಕೂಳ್ಳುವ ನಮ್ಮೂರ ಹಸಿರು ಸಿರಿಯ ಸೂಬಗನ್ನು ಸವಿಯುವುದೇ ಒಂದು ಅದೃಷ್ಟ. ಮಧ್ಯಾಹ್ನದ ಊಟದ ಬಳಿಕ, ಒಂದು ಕಟ್ಟೆಯ ಮೇಲೆ ಅಜ್ಜ ತನ್ನ ಆಧ್ಯಾತ್ಮಿಕ ತಾಳೆಗರಿಗಳೂಂದಿಗೆ ಕುಳಿತರೆ, ನಮ್ಮಜ್ಜಿ ಇನ್ನೊಂದು ಕಟ್ಟೆ ಮೇಲೆ ತನ್ನ ವೀಳ್ಯದೆಲೆ ಪೆಟ್ಟಿಗೆಯೂಂದಿಗೆ ಕುಳಿತು, ಗಂಡನಿಗೆ ಮನೆಯ ವ್ಯವಹಾರಗಳ ಕಿರು ವರದಿ ಒಪ್ಪಿಸುತ್ತಿದ್ದರು. ನನಗೆ ನೆನಪಿರುವಂತೆ ಅಜ್ಜನೆಂದೂ ಸಲಹೆ ನೀಡಿದ್ದಿಲ್ಲ! ಆದರೂ ಈ ವರದಿ ಒಪ್ಪಿಸುವ ಕಾರ್ಯಕ್ರಮಕ್ಕೆ ಹಲವಾರು ಬಾರಿ ನಾನು ಸಾಕ್ಷಿಯಾಗಿದ್ದೆ.
ಉದ್ಯೋಗ ವ್ಯವಹಾರಗಳಿಂದಾಗಿ ನಮ್ಮ ಅಪ್ಪ ಪರ ಊರುಗಳಲ್ಲಿ ಇರಬೇಕಾದ ಪ್ರಸಂಗ ಬಂದಾಗ, ನಮ್ಮ ಅಮ್ಮ ಮೂರು ಮಕ್ಕಳೂಂದಿಗೆ ತವರಲ್ಲೇ ಉಳಿದಳು. ನಮ್ಮ ಮಾವನವರೆಲ್ಲ ವಿದ್ಯಾವಂತರಾಗಿ ಪಟ್ಟಣ ಸೇರಿದಾಗ, ನಮ್ಮಮ್ಮ ಅಜ್ಜಿಗೆ ನೆರವಾದಳು. ನನ್ನ ಬದುಕಿನ ಮೊದಲ ಏಳು ವರ್ಷ ಅಜ್ಜಿಯ ಮನೆಯಲ್ಲೇ ಕಳೆದರೂ, ನಮ್ಮಪ್ಪನ ಊರಿಗೆ ಬಂದು ಶಾಲೆಗೆ ಸೇರಿ, ಬೇಸಿಗೆ ರಜೆಗೆ ಅಜ್ಜಿ ಮನೆಗೆ ಹೂದಾಗ, ಅಲ್ಲಿನ ಬಗ್ಗೆ ತಿಳಿದುಕೂಂಡಿದ್ದು ಜಾಸ್ತಿ. ಮನೆಯ ಕೆಲಸದ ನಾತು ಮತ್ತು ಆತನ ಹೆಂಡತಿ ನನ್ನ ಅರಿವಿನ ಮುಖ್ಯ ಮೂಲಗಳು. ಅವರಿಗೆ ಹೆಚ್ಚಿನ ವಿಷಯಗಳು ಸ್ವಂತ ಅನುಭವ. ಇನ್ನು ಕೆಲವು ವಿಷಯಗಳು ಹಳೆಯ ತಲೆಮಾರಿನ ಜನ ಅವರವರ ಅನುಭವಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು.
ಹೀಗೆ ಹಿರಿಯರು ಹಂಚಿಕೂಂಡ ವಿಷಗಳಲ್ಲಿ ಒಂದು ನಮ್ಮಜ್ಜಿಗೆ ಮೈಮೇಲೆ ದೆವ್ವ ಬರುತ್ತಿದ್ದ ಕಥೆಯೂ ಒಂದಾಗಿತ್ತು. ನಮ್ಮಜ್ಜಿ ಊರಿನ ದಾದಿ, ಯಾವುದೇ ಮನೆಯಲ್ಲಿ ಬಸುರಿ ಹೆಂಗಸಿದ್ದರೂ ಅವರೆಲ್ಲರಿಗೂ ನಮ್ಮಜ್ಜಿಯೇ ಡಾಕ್ಟರ್. ಅದಕ್ಕೆ ಜಾತಿ ಬೇದವಿಲ್ಲ. ಬ್ರಾಹ್ಮಣ, ಒಕ್ಕಲಿಗ, ಗಾಣಿಗ, ಹೂಲೆಯ ಎನ್ನುವ ಬೇದವಿಲ್ಲದೆ ನಮ್ಮಜ್ಜಿ ಪ್ರಸೂತಿ ಕೆಲಸಕ್ಕೆ ಹೋಗುತ್ತಿದ್ದರು. ಹಲವಾರು ಮಡಿವಂತರು ತಂದ ಆಕ್ಷೇಪಗಳಿಗೆ ನಮ್ಮಜ್ಜ ನಸುನಕ್ಕು ಸುಮ್ಮನಿದ್ದಾಗ, ಆಕ್ಷೇಪಣೆಕಾರರು ಮೌನವಾದರೂ, ಒಳಗೂಳಗೆ ವಟಗುಟ್ಟುತ್ತಿದ್ದರು.
'ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಯಾವುದು ಹೇಳಿ? ಭಗವಂತ ಸೃಷ್ಟಿಸಿದ ವರ್ಣಬೇದಕ್ಕೆ ನಾವೇಕೆ ಜಾತಿಯ ಬಣ್ಣ ಹಚ್ಚಬೇಕು? ಇನ್ನೊಂದು ಜೀವದ ಕಷ್ಟ ಸುಖದಲ್ಲಿ ಭಾಗಿಯಾದಗ ನಾವೆಲ್ಲರೂ ಶೂದ್ರರಲ್ಲವೆ? ಅದರಲ್ಲೇನು ತಪ್ಪು?' ಎಂದು ಊರವರ ಅಸಮ್ಮತಿಗೆಲ್ಲ ನಮ್ಮಜ್ಜಿ ತಲೆಕೆಡಿಸಿಕೂಳ್ಳುವ ಜಾಯಮಾನದವರಲ್ಲ. ಆದರೆ ಕಷ್ಟವಾಗುತ್ತಿದ್ದದ್ದು ನಮ್ಮಜ್ಜಿಯ ಆರೋಗ್ಯ ಸಮಸ್ಯೆಯಲ್ಲಿ. ಊರವರ ಪ್ರಕಾರ ಸತ್ತ ಆತ್ಮವೂಂದು ನಮ್ಮಜ್ಜಿಯನ್ನು ಕಾಡುತ್ತಿತ್ತು. ಆ ಆತ್ಮ ಆಕೆಯೂಳಗೆ ಸೇರಿಕೊಂಡಾಗ ಆಕೆ ವಿಚಿತ್ರವಾಗಿ ಆಡುತ್ತಿದ್ದರಂತೆ. ಕೈಗೆ ಸಿಕ್ಕಿದ ವಸ್ತುಗಳನ್ನು ಸಿಕ್ಕ ಸಿಕ್ಕಲ್ಲಿಗೆ ಎಸೆಯುತ್ತಿದ್ದರಂತೆ. ಮಕ್ಕಳು ಎದುರು ಸಿಕ್ಕರೆ, ಕೈಯಲ್ಲಿದ್ದದ್ದರಲ್ಲಿ ಹೊಡೆದು ಬಿಡುತ್ತಿದ್ದರಂತೆ! ಕೆಲವರ ಪ್ರಕಾರ ಆ ಸತ್ತ ಆತ್ಮ ನಮ್ಮಜ್ಜನ ಮೊದಲ ಹೆಂಡತಿಯದ್ದು! ಈ ಹಣೆಪಟ್ಟಿ ಕಟ್ಟಿದ್ದು ಅಜ್ಜಿಯ ಧೀಮಂತಿಕೆಯನ್ನು ಖಂಡಿಸುತ್ತಿದ್ದ ಮಡಿವಂತ ಜನ. ನಮ್ಮಜ್ಜ ನಲವತೈದು ಕಿಲೋಮೀಟರ್ ದೂರದ ಉಡುಪಿಗೆ ನಡೆದು ಹೋಗಿ ಭೂತರಾಜರ ತಾಯಿತ ತಂದು ಕಟ್ಟಿದರೆ ಅಜ್ಜಿ ಸರಿಯಾಗಿ ಇರುತ್ತಿದ್ದರು. ಕಲವೂಮ್ಮೆ ಪ್ರಸೂತಿಗೆ ಹೋದಲ್ಲಿ ತಾಯಿತಕ್ಕೆ ಅಶುದ್ದಿಯಾದರೆ, ಸತ್ತ ಆತ್ಮ ಅದೇ ಸಮಯಕ್ಕೆ ಸರಿಯಾಗಿ ನಮ್ಮಜ್ಜಿಯ ಮೈಯಲ್ಲಿ ಬಂದರೆ, ಮತ್ತೆ ನಮ್ಮಜ್ಜನಿಗೆ ಉಡುಪಿಗೆ ನಡೆಯುವ ಯೋಗ! ಅಂದಿನ ಕಾಲದಲ್ಲಿ ಬಸ್ಸು, ಕಾರುಗಳು ಓಡಾಡುತ್ತಿರಲಿಲ್ಲ. ಟಾಂಗ ವ್ಯವಸ್ಥೆಯೂ ನಮ್ಮಜ್ಜನೂರಿಂದ ಸರಿಯಾಗಿ ಇಲ್ಲದೆ ಕಾಲ್ನಡಿಗೆಯೆ ಪ್ರಧಾನವಾಗಿದ್ದ ಕಾಲ. ಉಡುಪಿಗೆ ಬಂದು ಹೋಗುವುದು ನಮ್ಮಜ್ಜನಿಗೆ ನಾಲ್ಕು ದಿನದ ಕಾರ್ಯಕ್ರಮ. ಉಡುಪಿಗೆ ಬಂದಮೇಲೆ ಸ್ವಾಮೀಜಿಗಳ ಒತ್ತಾಯಕ್ಕೆ ಮಣಿದು ಒಂದು ದಿನವೊ ಎರಡು ದಿನವೊ ಉಳಿದುಕೊಂಡರೆ ಬರೋಬ್ಬರಿ ಒಂದು ವಾರದ ಕಾರ್ಯಕ್ರಮ. ಮಳೆಗಾಲವಾದರೆ ಹೊರಟ್ಟಿದ್ದೆ ಸಮಯ, ಹಿಂತಿರುಗಿ ಬಂದಿದೆ ಸಮಯ. ಮೂರು ನದಿಗಳನ್ನು ದಾಟಲು ದೋಣಿಯ ಸಮಯ ಕಾಯಬೇಕು. ವಿಪರೀತ ಪ್ರವಾಹವಿದ್ದರೆ ಅದು ಇಳಿಯಲು ಕಾಯಬೇಕು. ಕರಾವಳಿಯ ಝಡಿಮಳೆ ಕೆಲವೊಮ್ಮೆ ನಡೆಯುವ ವೇಗವನ್ನೂ ಕಡಿಮೆ ಮಾಡಿಬಿಡುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳು ಇಂದು ಕಠಿಣವಾಗಿ ಕಂಡರೂ, ಅಂದಿನವರ ನಿತ್ಯ ಬದುಕಿನ ಚಟುವಟಿಕೆಗಳಾಗಿದ್ದುವು.
ಬಲಗಡೆ ಇದ್ದ ಬಾವಿಕಟ್ಟೆ ದಾಟಿ ಹೂರಬಂದರೆ, ಕಟ್ಟ ಹುಣಿ. ಆ ಕಟ್ಟ ಹುಣೆ ಹೆಚ್ಚು ಕಡಿಮೆ ಆರಡಿ ಎತ್ತರವಿದ್ದು, ಸುಮಾರು ಎಂಟು ಅಡಿಗಳಷ್ಟು ಅಗಲವಿದ್ದು, ನಮ್ಮಜ್ಜನ ಮನೆಯ ಬಾವಿ ಕಟ್ಟೆಯಿಂದ ಸುರುವಾಗಿ, ಸುಮಾರು ಐದುನೂರು ಮೀಟರ್ ಗಳ ದೂರದಲ್ಲಿದ್ದ ನೀರಿನ ತೊರೆಯ ಬಳಿ ಕೊನೆಗೂಳ್ಳುತ್ತಿತ್ತು. ಮನೆಯ ಕೆಲಸದಾಳು "ನಾತು"ವಿನ ಪ್ರಕಾರ, ಹಿಂದಿನ ಕಾಲದಲ್ಲಿ ಆ ಕಟ್ಟ ಹುಣಿಯ ಒಡೆತನಕ್ಕಾಗಿ ಹೊಡೆದಾಟಗಳಾದದ್ದಿದೆ. ನಮ್ಮ ಅಜ್ಜನ ತಂದೆಯ ಪ್ರಾಬಲ್ಯದಿಂದ ಅದು ನಮ್ಮ ಅಜ್ಜನ ಮನೆತನದ ಒಡೆತನಕ್ಕೆ ಬಂತು. ಆ ಕಟ್ಟಹುಣಿಯುದ್ದಕ್ಕೂ ಬೆಳೆದು ನಿಂತ ಫಲವತ್ತಾದ ತೆಂಗಿನ ಮರಗಳು. ಕಟ್ಟಹುಣಿಯ ಕೂನೆಯಲ್ಲಿದ್ದ ನೀರಿನ ತೊರೆ, ದಕ್ಷಿಣ ಕನ್ನಡದ ಕಡೆ ಇಂತಹ ತೊರೆಗಳನ್ನು "ಸಾರ್" ಎಂದು ಕರೆಯುತ್ತಾರೆ. ಸಣ್ಣದೇನಲ್ಲ ಸುಮಾರು ಹದಿನೈದು ಅಡಿ ಅಗಲದ ತೊರೆ. ಆಂಗ್ಲರ ನಾಡಿನಲ್ಲಿ ನದಿ ಎಂದು ಕರೆಯಬಹುದಾದಷ್ಟು ದೂಡ್ಡದಾದರೂ ನಮ್ಮೂರಲ್ಲಿ ಅದು ಕೇವಲ ಸಾರ್! ಯಾಕೆಂದರೆ ಇಂಗ್ಲೆಂಡ್ ನಲ್ಲಿ ನಾನು ಕಂಡ ಕೆಲವುನದಿಗಳು ಆ ತೊರೆಗಿಂತ ಸಣ್ಣಗಿವೆ! ಆ ತೊರೆಗೆ ಕಟ್ಟು ಕಟ್ಟಿ ಇಡೀ ಬಯಲು ಗದ್ದೆಯಲ್ಲಿ ಸುಗ್ಗಿ ಬೆಳೆ ಬೆಳೆಸುತ್ತಿದ್ದ ಕಾಲವೂಂದಿತ್ತೆಂದು ಕೇಳಿ ತಿಳಿದಿದ್ದೆ. ಆ ತೊರೆ ದಾಟಿ ಪಕ್ಕದೂರಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ ಕಟ್ಟಿದ್ದರು. ನಮ್ಮೂರಿನ ಕಡೆ ಈ ಸೇತುವೆಗಳಿಗೆ 'ಪಾಂಪು' ಎನ್ನುತ್ತಾರೆ. ಜೋರಾಗಿ ಮಳೆ ಬಂದು ತೊರೆ ತುಂಬಿ ಹರಿದರೆ, ಪಾಂಪು ನೀರಿನಲ್ಲಿ ಮುಳುಗಿ ಬಿಡುತ್ತಿತ್ತು. ಆ ಸಾರಿನ ಎರಡೂ ಕಡೆ ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದು ಕೆಲವೊಮ್ಮೆ ಸಾರು ಮಾಯವಾಗುತಿತ್ತು. ಹಬ್ಬ ಹರಿದಿನಗಳಿಗೆ ಬೇಕಾದ ಕಡುಬಿನ ಎಲೆಗಳು ಅಲ್ಲಿ ಯಥೇಚ್ಛ ಬೆಳೆಯುತಿತ್ತು. ಬೇಸಿಗೆಯಲ್ಲಿ ಊರಿನ ಯುವಕರು ಶ್ರಮದಾನಮಾಡಿ ನೀರು ಸರಾಗವಾಗಿ ಹರಿಯಲು ದಾರಿ ಮಾಡಿಕೊಡುತಿದ್ದರು.
ಊರವರು ಹೇಳುತ್ತಿದ್ದ, ನಮ್ಮಜ್ಜಯ ಜೀವನದಲ್ಲಿ ನಡೆದ ಹಲವಾರು ಘಟನೆಗಳಲ್ಲಿ ಗಸ್ಮಾರಿ ಪೂರ್ಬಗಳು ಹೇಳುತ್ತಿದ್ದ ಕಥೆ ತುಂಬಾ ರೋಚಕವಾದದ್ದು.
ಒಂದು ಮಳೆಗಾಲದಲ್ಲಿ ಪಕ್ಕದೂರಿನ ಅಂಗರ ಪೂಜಾರಿ ಮಗಳು ತುಂಬು ಗರ್ಭಿಣಿ ಗಿರಿಜಾಳಿಗೆ ನೋವು ಆರಂಭವಾಯಿತು. ಮೂರು ದಿನಗಳಿಂದ ಸುರಿಯುತಿದ್ದ ಮಳೆ ನಿಲ್ಲುವ ಸೂಚನೆ ಕಾಣುತ್ತಿರಲ್ಲಿಲ್ಲ. ಮಧ್ಯಾಹ್ನದ ಊಟ ಮುಗಿಸಿ ಸ್ವಲ್ಪ ಕಣ್ಣು ಮುಚ್ಚಿ ಕುಳಿತಿದ್ದ ಪುಟ್ಟಕ್ಕನಿಗೆ ಅಂಗಳದಲ್ಲಿ ಕೊರಂಬು ಹಾಕಿಕೊಂಡು ನಿಂತು 'ಪುಟ್ಟಕ್ಕೆರೇ...'ಪುಟ್ಟಕ್ಕೆರೇ....' ಎಂದು ಕ್ಷೀಣ ದನಿಯಲ್ಲಿ ಕರೆಯುತ್ತಿದ್ದ ಅಂಗರನ ಪರಿಚಯವಾಗಲು ಸ್ವಲ್ಪ ಸಮಯ ಹಿಡಿಯಿತು. ಅಂಗರ ಪೂಜಾರಿ ಹಲವು ವರ್ಷಗಳ ಹಿಂದೆ ನಮ್ಮ ಅಜ್ಜನ ಗದ್ದೆ ಕೆಲಸಕ್ಕೆ ಬರುತ್ತಿದ್ದ. ಒಮ್ಮೆ ಕಾರಣಾಂತರ ಜಗಳವಾಗಿ ಈ ಕಡೆಗೆ ಬರುವುದು ನಿಲ್ಲಿಸಿದ್ದ. ಆತನ ಮಗಳು ಗರ್ಭಿಣಿಯಾಗಿದ್ದು ಅಜ್ಜಿಗೆ ತಿಳಿದಿತ್ತು. ಆದರೆ ವೈಷಮ್ಯದಿಂದಾಗಿ ಅಂಗರನಾಗಲೀ ಆತನ ಹೆಂಡತಿಯಾಗಲೀ, ಪುಟ್ಟಕ್ಕನಿಗೇ ವಿಷಯ ತಿಳಿಸದಿದ್ದರೂ, ಇಪ್ಪತ್ತೊ ಇಪ್ಪತ್ತೈದೊ ಮನೆಗಳಿರು ಊರುಗಳಲ್ಲಿ ಒಬ್ಬರಿಗೆ ಶೀತವಾದರೂ ಅದು ಸಮಾಚಾರವಾಗುತ್ತಿದ್ದ ಕಾಲದಲ್ಲಿ, ಅಂಗರನ ಮಗಳು ಬಸುರಾಗಿದ್ದು ಊರಿಗೆಲ್ಲ ತಿಳಿದ ವಿಷಯ. ಅದರ ಜೊತೆಗೆ ನಮ್ಮಜ್ಜಿ ನಾಟಿ ವೈದ್ಯಕೂಡ. ನಮ್ಮೂರ ಜನ ಮಾತ್ರವಲ್ಲ ಅಕ್ಕಪಕ್ಕದ ಊರುಗಳಿಂದಲೂ ಯಾವುದೇ ಅನಾರೋಗ್ಯಕ್ಕೆ ಜನರಿಗೆ ಮೂದಲು ನೆನಪಾಗುತ್ತಿದ್ದು ಪುಟ್ಟಕ್ಕ. ಅಂಗರನನ್ನು ವಿಚಾರಿಸಲು ಮುಂಬಾಗಿಲ ಬಳಿ ಬಂದ ಅಜ್ಜಿಗೆ ಮಗಳು ಗಿರಿಜಾಳಿಗೆ ಕಳೆದ ರಾತ್ರಿಯಿಂದ ಹೆರಿಗೆ ನೋವು ಶುರುವಾಗುವ ವಿಷಯ ತಿಳಿಸಿದ. ಪುಟ್ಟಕ್ಕ ಒಳ ಬಂದು ಹದಿನೆಂಟರ ಹರೆಯದ ಮಗಳಿಗೆ ಕೆಲವು ಸೂಚನೆಗಳನ್ನಿತ್ತು, ತನ್ನ ಕೊರಂಬು ಮತ್ತು ಕತ್ತಿ ಹಿಡಿದು ಅಂಗರನ ಹಿಂದೆ ಹೊರಟರು.
ದಾರಿಯಲ್ಲಿ ಅಂಗರ ತನ್ನಿಂದ ಆದ ತಪ್ಪಿಗೆ ಕ್ಷಮೆ ಯಾಚಿಸಿದ, ಇನ್ನು ಮುಂದೆ ಎಂದೂ ತಪ್ಪು ನಡೆಯದು ಎಂದು ಕಣ್ಣೀರಿಟ್ಟ. ಪುಟ್ಟಕ್ಕ ಅಂದರು 'ಅದೆಲ್ಲ ಈಗ ಬಿಟ್ಟು ಬಿಡು ಮಾರಾಯ ಮಗುವಿನ ಪ್ರಸವ ಸುಖಕರವಾಗಿ ಆಗಲಿ ಏಲ್ಲ ಆಮೇಲೆ ನೋಡೋಣ. ನಿನ್ನೆಯಿಂದ ನೋವು ಶುರುವಾಗಿದ್ರೂ ಯಾಕೆ ನಂಗೆ ಮೊದಲೇ ಹೇಳಿ ಕಳಿಸ್ಲಿಲ್ಲ? ಪಾಪ ಮಗು ಅದೆಷ್ಟು ನೋವು ಅನುಭವಿಸ್ತೋ' ಎಂದು ಆಕ್ಷೇಪಿಸಿದರು.
ಅಂಗರನಿಗೆ ಇನ್ನಷ್ಟು ನಾಚಿಕೆಯಾಯಿತು. 'ನಾನು ಬೆಳಿಗ್ಗೆ ಮುಲ್ಕಿಯಿಂದ ಡಾಕ್ಟರ್ ಅಮ್ಮನ ಕರ್ಕೂಂಡು ಬಂದೆ ಅವರು ಮಂಗಳೂರಿನ ದೊಡ್ಡಾಸ್ಪತ್ರೆ ಕರ್ಕೂಂಡು ಹೋಗಿ ಅಂದ್ರು. ಈ ಮಳೆಗೆ ಏನು ಮಾಡಬೇಕು ಅಂತ ತಿಳಿಯದೆ ನಿಮ್ಮ ಹತ್ರ ಬಂದೆ' ಅಂಗರ ಹುಲ್ಲು ತುಂಬಿದ ಹುಣಿಯಲ್ಲಿ ಅಜ್ಜಿಯ ಹಿಂದೆ ಹೆಜ್ಜೆ ಹಾಕುತ್ತಿದ್ದ. ಪುಟ್ಟಕ್ಕ ಒಂದು ಕ್ಷಣ ನಿಂತು ತಿರುಗಿ ಅಂಗರನ ಮುಖ ದಿಟ್ಟಿಸಿ ನೋಡಲು ಪ್ರಯತ್ನಿಸಿದರು. ಅಂಗರ ತಲೆ ಎತ್ತುವ ಸಾಹಸ ಮಾಡಲಿಲ್ಲ. ಮತ್ತೆ ಎರಡು ಫರ್ಲಾಂಗ ದೂರದಲ್ಲಿದ್ದ ಅಂಗರನ ಮನೆಯವರಗೆ ಇಬ್ಬರೂ ಮೌನವಾಗಿದ್ದರು.
ಮಧ್ಯಾಹ್ನ ಮೂರು ಗಂಟೆಯಿಂದ ಆರಂಭವಾದ ಪುಟ್ಟಕ್ಕನ ಪ್ರಸೂತಿ ಕೆಲಸ ಮುಗಿದು ಮುದ್ದಾದ ಹೆಣ್ಣು ಮಗು ಜನಿಸಿದಾಗ ಗಂಟೆ ರಾತ್ರಿಯ ಒಂಬತ್ತು ಕಾಲು, ಪುಟ್ಟಕ್ಕ ಹೆತ್ತ ಹೆಣ್ಣಿನಷ್ಟೆ ಸುಸ್ತಾಗಿದ್ದರು. ಹಸಿ ಬಾಣಂತಿಗೊಂದಿಷ್ಟು ಹಾಗೂ ಅಂಗರನ ಹೆಂಡತಿಗೊಂದಿಷ್ಟು ಸೂಚನೆ, ಆದೇಶಗಳನ್ನಿತ್ತು ಮನೆಯ ಕಡೆ ಹೊರಟಾಗ ಮಳೆ ತನ್ನ ಅಬ್ಬರವನ್ನು ಕಮ್ಮಿ ಮಾಡಿ ಜನುಗುಟ್ಟುತಿತ್ತು. ಅಂಗರ ತೆಂಗಿನ ಸೋಗೆ ಬಿಗಿದ ತೂಟೆ ರೆಡಿ ಮಾಡಿ ಪುಟ್ಟಕ್ಕನನ್ನು ಮನೆಗೆ ಬಿಟ್ಟು ಬರಲು ಹೂರಟ. ಪುಟ್ಟಕ್ಕ ಅಂದರು 'ಹಸಿ ಬಾಣಂತಿಯನ್ನು ಈ ರಾತ್ರಿಯ ವೇಳೆಯಲ್ಲಿ ಬಿಟ್ಟು ನೀನೆಲ್ಲೂ ಹೋಗಬೇಡ. ಆ ತೂಟೆ ಇಲ್ಲಿ ಕೊಡು ನಾನು ಹೊಗ್ತೆನೆ. ಮಳೆ ಹೇಗೂ ಕಡಿಮೆಯಾಗಿದೆ ನಾಳೆ ಬೆಳಿಗ್ಗೆ ಆ ಕಡೆ ಯಾರಾದರೂ ಬರುವವರಿದ್ರೆ ತಾಯಿ ಮಗು ಹೇಗಿದ್ದಾರೆಂದು ಹೇಳಿ ಕಳೀಸು' ಎಂದು ಪುಟ್ಟಕ್ಕ, ಅಂಗರನ ಕೈಯಿಂದ ತೂಟೆ ತೆಗೆದುಕೊಂಡು ಮನೆಯ ಕಡೆ ಹೂರಟರು. ತೂಟೆಯಲ್ಲಿದ್ದ ಸೊಗೆ ಹೊತ್ತಿ ಉರಿಯಲು ಮಾಡುತ್ತಿದ್ದ ಚಿಟಿ..ಚಿಟಿ ಸದ್ದು, ಪುಟ್ಟಕ್ಕನ ಹೆಜ್ಜೆಯ ಭಯಕ್ಕೆ ತಟ್ಟನೆ ಹುಣಿಯಿಂದ ಹಾರಿ ಗುಳುಂ ಎಂದು ಸದ್ದು ಮಾಡುತ್ತಾ ಗದ್ದೆಗೆ ಹಾರುತ್ತಿದ್ದ ಕಪ್ಪೆಗಳ ವಟಗುಟ್ಟು ಮತ್ತು ಜಿರುಂಡೆಗಳ ಸದ್ದು ಬಿಟ್ಟರೆ ಮತ್ತೆಲ್ಲ ನೀರವ ಮೌನ.
ಪುಟ್ಟಕ್ಕ ಸಾರಿನ ಬಳಿ ಬಂದಾಗ ಮಳೆ ಸ್ವಲ್ಪ ಜೋರಾಯಿತು. ತೂಟೆ ಸ್ವಲ್ಪ ಮಳೆಯಲ್ಲಿ ನೆನೆದು ಮಂದವಾಯಿತು. ಮಂದ ಬೆಳಕಿನಲ್ಲಿ ಪುಟ್ಟಕ್ಕ ಕಲ್ಲು ಪಾಪಿನ ಬದಲಾಗಿ ಕಡುಬಿನೆಲೆಯ ಪೊದೆಗೆ ಕಾಲಿಟ್ಟರು. ಮಳೆಯಲ್ಲಿ ನೆನೆದು ಸಡಿಲಗೊಂಡ ಮಣ್ಣು ಮೆಲ್ಲಗೆ ನೀರಿನ ರಭಸಕ್ಕೆ ಕೊಚ್ಚಿ ನೀರಿನಲ್ಲಿ ತೇಲಿ ಹೋಗಲಾರಂಭಿಸಿತು. ಪುಟ್ಟಕ್ಕ ಒಂದು ಕೈಯಲ್ಲಿ ತೂಟೆ ಇನ್ನೂಂದು ಕೈಯಲ್ಲಿ ಪೂದೆಯನ್ನು ಗಟ್ಟಿಯಾಗಿ ಹಿಡಿದುಕೂಂಡರು. ಗಟ್ಟಿಯಾಗಿ ಕೂಗಿದರೂ ದ್ವನಿ ಮಾರುದೂರ ಕೇಳದಷ್ಟು ಗಟ್ಟಿಯಾಗಿ ಮಳೆ ಸುರಿಯುತಿತ್ತು. ದೂರದಲ್ಲಿ ನೋಡಿದರೆ ನಡುಸಾರಿನಲ್ಲಿ ದೊಂದಿ ಹೋದಂತೆ ಕಾಣಿಸುತ್ತಿತ್ತು!
ಗಸ್ಮಾರಿ ಪೂರ್ಬುಗಳು ಸಂಜೆ ಲಿಲ್ಲಿ ಬಾಯಮ್ಮನ ಜೊತೆಗೆ ಜಗಳವಾಡಿ ಮೈಲಿಗಲ್ಲು ಬಳಿಯ ಗಡಂಗಿನಲ್ಲಿ ಸ್ವಲ್ಪ ಇಂಗ್ಲಿಷ್ ಸಾರಾಯಿಗೆ ತುಂಬಾ ನೀರು ಹಾಕಿ ಕುಡಿದು ಅದು ತಲೆಗೆ ಹತ್ತಲಿಲ್ಲ ಎಂದು ಗಡಂಗಿನ ಸುಧಾಕರ ಶೆಟ್ಟಿಯ ಬಳಿ ಜಗಳವಾಡಿ, ಒಂದಷ್ಟು ಕಳ್ಳು ಏರಿಸಿಕೊಂಡು, ಲಿಲ್ಲಿ ಬಾಯಮ್ಮನ ತಮ್ಮ ದುಬೈಯಿಂದ ತಂದ ಊರಲ್ಲಿ ಕಾಣಸಿಗುವ ಒಂದೇ ಒಂದು ಪಟ್ಟಕ್ಕನೆ ಕುಕ್ಕಿ ಸಣ್ಣದು ಮಾಡಬಹುದಾದ ಕೊಡೆ ಹಿಡಿದು ಕೊಂಡು, ಒಂದು ಹೆಜ್ಜೆ ಹುಣಿಯಲ್ಲಿ ಹತ್ತು ಹೆಜ್ಜೆ ಗದ್ದೆಯಲ್ಲಿಟ್ಟುಕೊಂಡು ಮನೆ ಕಡೆ ಹೂರಟಿದ್ದ. ಹಳ್ಳದ ಗದ್ದೆಯ ಹತ್ತಿರ ಬರುತ್ತಿದ್ದಂತೆ, ಗಸ್ಮಾರಿ ಪರ್ಬುವಿಗೆ ಸಾರಿನಲ್ಲಿ ಸಾಗುತ್ತಿದ್ದದೊಂದಿ ಕಾಣಿಸಿತು. ಮೊದಲ ನೋಟಕ್ಕೆ ಗಸ್ಮಾರಿ ಪರ್ಬುವಿಗೆ ನೆನಪಿಗೆ ಬಂದದ್ದು ಆತನ ಅಪ್ಪ ಹೇಳಿದ್ದ ಪಂಜುರ್ಲಿ ದೈವದ ಕಥೆ. ನಮ್ಮಜ್ಜನ ಮನೆ ದೈವ ಪಂಜುರ್ಲಿ ನಮ್ಮೂರು ಮಾತ್ರವಲ್ಲ ಅಕ್ಕ ಪಕ್ಕದ ಊರುಗಳಲ್ಲೂ ಬಹಳ ಪ್ರಸಿದ್ಧ. ಗಸ್ಮಾರಿಯ ತಂದೆ ತಾನು ಪಂಜುರ್ಲಿಯನ್ನು ಕಂಡ ಕಥೆಯನ್ನು ಊರವರಿಗೆಲ್ಲ ರಸವತ್ತಾಗಿ ವರ್ಣಿಸುತ್ತಿದ್ದ. ಆ ಕಥೆ ನೆನಪಾಗುತಿತ್ತಂತೆ, ಕುಡಿತದ ಮಬ್ಬು ಅರ್ಧಕ್ಕೆ ಇಳಿಯಿತು. ಆದರೂ ಅವನಿಗೆ ನೆನಪಿನಲ್ಲಿ ದೈವಗಳು ಮದ್ಯರಾತ್ರಿಯ ಮೇಲೆ ಹೂರ ಬರುತ್ತವೆ, ಇಷ್ಟೊಂದು ಬೇಗ ದೈವ ಇರಲಿಕ್ಕಿಲ್ಲ ಎಂದುಕೊಂಡರೂ, ಅಪ್ಪನ ಅನುಭವದ ಮಾತು ಮರೆಯಲಿಲ್ಲ. ಕಡೆಗೂ ಸ್ವಲ್ಪ ಧೈರ್ಯ ಮಾಡಿ ದೊಂದಿಯ ಬೆಳಕಿನೆಡೆಗೆ ಹೆಜ್ಜೆ ಹಾಕಲು ಪ್ರಯತ್ನಿಸಿದ. ಮಳೆಯ ತೀವ್ರತೆ ಕಡಿಮೆಯಾದ ಕಾರಣ ಪುಟ್ಟಕ್ಕನ ಕೈಯಲ್ಲಿದ್ದ ತೂಟೆ ಸ್ವಲ್ಪ ಜೋರಾಗಿ ಉರಿಯಲಾರಂಭಿಸಿತು. ನೀರಿನ ರಭಸಕ್ಕೆ ತೇಲಿ ಹೋಗುತ್ತಿದ್ದ ಪೂದೆ ಇನ್ನೆರಡು ಪೂದೆಗಳ ನಡುವೆ ಸಿಕ್ಕಿಹಾಕಿಕೂಂಡಿತ್ತು. ಪುಟ್ಟಕ್ಕನ ಕೈಯಲ್ಲಿನ ತೂಟೆ ಒಂದು ಕಡೆ ಸ್ಥಿರವಾಗಿದ್ದರಿಂದಲೊ ಅಥವಾ ಕುಡಿದ ಮತ್ತು ಕಮ್ಮಿಯಾದ್ದರಿಂದಲೊ ಗಸ್ಮಾರಿ ಪೊರ್ಬು ಇನ್ನೂ ಸ್ವಲ್ಪ ತೂಟೆಯಕಡೆ ಹೋಗುವ ಧೈರ್ಯ ಮಾಡಿದ. ಆಗ ಆತನಿಗೆ ಕ್ಷೀಣವಾಗಿ ಹೆಣ್ಣು ಧ್ವನಿ ಕೇಳಿಸಿತು. ಯಾವುದಾದರೂ ಮೋಹಿನಿಯ ಕಾಟವಿರಬಹುದೇ? ಅಂದುಕೊಂಡು ಒಂದು ಹೆಜ್ಜೆ ಹಿಂದೆ ಹಾಕಿದರೂ ಮತ್ತೆ ಧೈರ್ಯ ಮಾಡಿ ಸ್ವಲ್ಪ ಹತ್ತಿರ ಹೋಗಿ ಭೂತ, ದೈವಗಳ ಕೈವಾಡ ವಿರಲಾರದೆಂದು ಖಚಿತಪಡಿಸಿಕೂಂಡು, ಹೇಗೆ ತಾನು ಆ ಪೊದೆಯನ್ನು ಬದಿಗೆ ಎಳೆಯಬೇಕೆಂದು ಯೋಚಿಸುತ್ತಿರುವಾಗ, ಉರಿವ ತೂಟೆಯ ಬೆಳಕಿನಲ್ಲಿ ಪುಟ್ಟಕ್ಕನ ಮುಖ ಸ್ಪಷ್ಟವಾಗಿ ಗೋಚರಿಸಿ, ಗಸ್ಮಾರಿಗೆ ಪೂರ್ಣ ಧೈರ್ಯ ಬಂತು.
'ಹಾಗೆಯೇ ಹಿಡಿದುಕೂಂಡಿರಿ ಪುಟ್ಟಕ್ಕೆರೆ ಈಗ ಬಂದೆ' ಎಂದು ಪಕ್ಕದಲ್ಲಿದ್ದ ಏತದ ಬಾವಿಯ ಬಳಿಯಲ್ಲಿದ್ದ ಏತದ ಹಗ್ಗ ಗಂಟು ಬಿಡಿಸಿ ತಂದ. ಅಷ್ಟು ಹೊತ್ತಿಗೆ ಆತನ ಕುಡಿದ ಮತ್ತೆಲ್ಲ ಇಳಿದು ಹಗ್ಗಕ್ಕೂಂದು ಉರುಳು ಬಿಗಿದು ಪುಟ್ಟಕ್ಕನ ಕಡೆಗೆ ಎಸೆದ. ನೀರಿನ ರಭಸಕ್ಕೆ ಎಸೆದ ಹಗ್ಗ, ಪ್ರತಿ ಸಲವೂ ಗುರಿ ತಪ್ಪುತಿತ್ತು. ಹತ್ತಾರು ಬಾರಿ ಪ್ರಯತ್ನಿಸಿದ ಬಳಿಕ ಆತ ಎಸೆದ ಹಗ್ಗದ ತುದಿ ಪುಟ್ಟಕ್ಕನ ಕೈಗೆ ಸಿಕ್ಕಿತು.
'ಉರುಳು ಸೂಂಟಕ್ಕೆ ಹಾಕಿಕೂಳ್ಳಿ ಪುಟ್ಟಕ್ಕೆರೆ, ಅದು ಸೂಂಟದಲ್ಲಿ ಸರಿಯಾಗಿ ಸಿಕ್ಕಿಕೂಳ್ಳುವವರೆಗೆ ಪೂದೆ ಬಿಡ ಬೇಡಿ' ಎಂದು ತಾಕೀತು ಮಾಡಿ ಹಗ್ಗದ ಇನ್ನೂಂದು ತುದಿಯನ್ನು ಪಕ್ಕದಲ್ಲಿದ್ದ ಮರಕ್ಕೆ ಗಟ್ಟಿಯಾಗಿ ಬಿಗಿದು ಕಟ್ಟಿ, ಪುಟ್ಟಕ್ಕನನ್ನು ಮೇಲೆತ್ತಲು ಸಿದ್ಧನಾದ.
ನದಿಯ ದಡದಲ್ಲಿನ ಮನೆಯಲ್ಲಿ, ನಾಲ್ಕು ಗಂಡು ಮಕ್ಕಳೂಂದಿಗೆ ಹುಟ್ಟಿ ಬೆಳೆದ ಪುಟ್ಟಕ್ಕನಿಗೆ ಈಜುವುದು ಯಾರೂ ಕಲಿಸಬೇಕಾಗಿರಲಿಲ್ಲ. ಆದರೆ ತುಂಬಿ ಹರಿಯುವ ವಿಶಾಲವಾದ ನದಿಯಲ್ಲಿ ಈಜಿ ದಡ ಸೇರಲು ಬೇಕಾದ ಎದೆಗಾರಿಕೆ ಮತ್ತು ಶಕ್ತಿ ಇದ್ದರೂ, ಈ ಮಣ್ಣು ಮಿಶ್ರಿತ, ಮುಳ್ಳು ಪೂದೆಗಳಿಂದ ಆವೃತವಾದ ಸಾರಿನಲ್ಲಿ, ಈ ಕತ್ತಲಲ್ಲಿ ಈಜಿ ದಡ ಸೇರಲು ಬೇಕಾಗಿರುವ ಛಾತಿಯೇ ಬೇರೆ ಅನ್ನಿಸಿತು ಪುಟ್ಟಕ್ಕನಿಗೆ. ಒಂದೇ ಒಂದು ಧೈರ್ಯ ಅಂದರೆ ಈ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸತ್ತು ಹೋದರೆ, ಅನಾಥವಾಗಿ ದಿನಗಟ್ಟಲೆ ಕಾಯಬೇಕಿಲ್ಲ. ಯಾಕೆಂದರೆ ಗಸ್ಮಾರಿ ಸಾಕ್ಷಿ ಇದ್ದಾನೆ ಅನ್ನಿಸಿತು!
ತನ್ನ ಹುಚ್ಚು ಯೋಚನೆಗೆ ತಾನೆ ಮನದೊಳಗೆ ನಕ್ಕು, ಗಸ್ಮಾರಿ ಎಸೆದ ಹಗ್ಗವನ್ನು ತನ್ನ ಸೊಂಟಕ್ಕೆ ಬಿಗಿದು, ಒಂದು ಕೈಯಲ್ಲಿ ಹಿಡಿದ ತೂಟೆಯೊಂದಿಗೆ ಪುಟ್ಟಕ್ಕ ಮೆಲ್ಲಗೆ ಇಷ್ಟು ಹೊತ್ತು ಆಸರೆಯಾಗಿದ್ದ ಪೂದೆಯನ್ನು ಬಿಟ್ಟು ದಡದ ಕಡೆಗೆ ಬರತೊಡಗಿದರು. ಪುಟ್ಟಕ್ಕ ದಡದ ಹತ್ತಿರ ಬರುತ್ತಿದ್ದಂತೆ ಗಸ್ಮಾರಿ ಹಗ್ಗದ ಉದ್ದವನ್ನು ಕಡಮೆ ಮಾಡುತ್ತ ಹಗ್ಗದ ಮೇಲಿನ ತನ್ನ ಹಿಡಿತವನ್ನು ಗಟ್ಟಿಗೂಳಿಸುತ್ತಿದ್ದ. ಆಸರೆಗಾಗಿ ಎಡಾಲನ್ನು ಸ್ವಲ್ಪ ಹಿಂದೆ ಊರಿಕೂಂಡು, ಬಲಗಾಲಿನಿಂದ ಎದುರಿಗಿದ್ದ ಹುಣಿಗೆ ಒತ್ತಿ ಹಿಡಿದಿದ್ದ. ಪುಟ್ಟಕ್ಕ ತೀರ ಹತ್ತಿರ ಬಂದಾಗ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದು ಮೇಲೆಳೆದುಕೊಂಡು ಬಿಟ್ಟ.
ಒದ್ದೆಯಾದ ತಲೆಯೆಂದ ಕಣ್ಣಿಗೆ ಇಳಿಯತ್ತಿದ್ದ ನೀರನ್ನು ಒರೆಸಿಕೊಳ್ಳುತ್ತ 'ಈ ಕತ್ತಲಲ್ಲಿ, ಈ ಮಳೆಗೆ ನೀವೇಲ್ಲಿಗೆ ಹೋರಟದ್ದು ಮಾರಾಯರೆ' ಎಂದ ಗಸ್ಮಾರಿ.
'ಅಂಗನ ಮಗಳಿಗೆ ನೋವು ಶುರುವಾಗತ್ತು ಪೂರ್ಬಗಳೆ, ಹೆರಿಗೆ ಮುಗಿಸಿ ಮನೆಗೆ ಹೊರಟಿದ್ದೆ. ಪಾಂಪಿನ ಮೇಲೆ ಕಾಲಿಟ್ಟೆ ಜಾರಿ ನೀರಿಗೆ ಬಿದ್ದೆ. ಈ ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡೆ, ನೀವಲ್ಲದಿದ್ರೆ ಇವತ್ತು ಬದುಕಿನ ಕೊನೆಯಾಗುತ್ತಿತ್ತೆನೂ' ಎಂದು ಚಳಿಯಲ್ಲಿ ನಡುಗಲಾರಂಭಿಸಿದರು ಪುಟ್ಟಕ್ಕ. ನೀರಿನಲ್ಲಿ ಸುಮಾರು ಒಂದು ಗಂಟೆ ಸಿಕ್ಕಿ ಹಾಕಿಕೊಂಡಾಗ ಆಗದ ಚಳಿ, ದಡ ಸೇರಿದ ಒಂದೆರಡು ನಿಮಿಷಗಳಲ್ಲಿ ತಡೆಯಲಸಾಧ್ಯ ಅನ್ನಿಸಿತು.
'ನಡೆಯಿರಿ ನಿಮ್ಮನ್ನು ಮನೆಗೆ ಬಿಟ್ಟು ಹೋಗ್ತೆನೆ' ಎಂದು ಎರಡೊ ಮೂರೊ ಕಡ್ಡಿ ಮುರಿದ ದುಬೈಯ ಕೊಡೆಯನ್ನು ಶಾಸ್ತ್ರಕ್ಕೆಂದು ಹಿಡಿದುಕೊಂಡು ಹೊರಟಾಗ, ಚಳಿಯಲ್ಲಿ ನಡಗುತ್ತ ಪುಟ್ಟಕ್ಕ ಅರ್ಧ ಸುಟ್ಟ ತೂಟೆ ಹಿಡಿದು ಆತನ ಮುಂದೆ ನಡೆದರು. ಸ್ವಲ್ಪ ದೂರ ಸಾಗುತ್ತಿದಂತೆ, ಮುಳ್ಳಿನ ಪೂದೆಯಲ್ಲಿ ಸಿಕ್ಕಿಹಾಕಿಕೂಂಡ ಪುಟ್ಟಕ್ಕನ ಕೊರಂಬು ಸಿಕ್ಕಿತು. ಮೆಲ್ಲಗೆ ಬಗ್ಗಿ ಗಸ್ಮಾರಿ ಕೊರಂಬು ಎತ್ತಿ ಪುಟ್ಟಕ್ಕನ ಕೈಗಿತ್ತ. ಕೊರಂಬು ಧರಿಸಿದ ಮೇಲೆ ಚಳಿ ಸ್ವಲ್ಪ ಕಮ್ಮಿ ಅನ್ನಿಸಿತು. ಬಲಕ್ಕೆ ತಿರುಗಿ ಕಟ್ಟಹುಣಿ ಹತ್ತಿ ಮನೆ ಸೇರಿದ ಪುಟ್ಟಕ್ಕ, ಮಗಳನ್ನು ಕರೆದು, ಗಸ್ಮಾರಿಗೆ ಒಲೆಯಲ್ಲಿದ್ದ ಕಷಾಯದ ಪಾತ್ರೆಯಿಂದ ಒಂದು ಲೋಟ ಬಡ್ಡು ಹುಳಿಯ ಕಷಾಯ ಕೊಡಲು ಹೇಳಿದರು. ಗಸ್ಮಾರಿ ಜಗಲಿಯಲ್ಲಿ ಕುಳಿತಿದ್ದ ಅಜ್ಜನಿಗೆ ನಡೆದ ಕಥೆ ಹೇಳಿ, ದೂರದಲ್ಲಿ ತೂಟೆ ಹೋಗುತ್ತಿದ್ದಂತೆ ಕಾಣುತ್ತಿದ್ದದ್ದು. ಅದು ತನ್ನಪ್ಪ ಹೇಳಿದ ಪಂಜುರ್ಲಿಯ ಕಥೆ ನೆನಪಿಗೆ ಬಂದದ್ದು ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸುತ್ತ ಕಷಾಯ ಗುಟುಕರಿಸುತ್ತಿದ್ದ. ನಮ್ಮಜ್ಜ ಮನದಲ್ಲೇ ಮುಖ್ಯಪ್ರಾಣನನ್ನು ಸ್ಮರಿಸುತ್ತ, ನಸುನಗುತ್ತ ಕುಳಿತ್ತಿದ್ದರು. ಮಾರನೇ ದಿನ ಊರೆಲ್ಲಾ ಪುಟ್ಟಕ್ಕ ಪ್ರವಾಹದಲ್ಲಿ ಕೊಚ್ಚಿ ಹೋದ ಕಥೆ, ಗಸ್ಮಾರಿ ಪೂರ್ಬುಗಳು ಭೂತವೆಂದು ಭಯಪಟ್ಟಿದ್ದು ಸುದ್ದಿಯಾಗಿತ್ತು!
ಪ್ರತಿ ಮಳೆಗಾಲದಲ್ಲೂ ಯಾರಾದರೂಬ್ಬರು ಪುಟ್ಟಕ್ಕನ ಕಥೆಯನ್ನು ನೆನಪಿಸುತ್ತಿದ್ದರು. ಅಂಗರ ತನ್ನ ಮೂಮ್ಮಗಳಿಗೆ 'ಪುಟ್ಟಕ್ಕ' ಎಂದೆ ಹೆಸರಿಟ್ಟಿದ್ದ.
ನಮ್ಮಪ್ಪ ವ್ಯವಹಾರಗಳೆಲ್ಲ ಲಾಸ್ ಮಾಡಿಕೊಂಡು ನಮ್ಮೂರಲ್ಲಿ ಮನೆ ಕಟ್ಟಿ, ನಾವು ಅಜ್ಜಿ ಮನೆ ಬಿಟ್ಟು ಐದಾರು ವರ್ಷಗಳಲ್ಲಿ ನಮ್ಮಜ್ಜ ತೀರಿಕೊಂಡರು. ನಾಲ್ಕು ಜನ ಸ್ವಂತ ಗಂಡು ಮಕ್ಕಳಿದ್ದರೂ, ಎಲ್ಲ ಸೇರಿ ನಮ್ಮಜ್ಜಿಯನ್ನು ತಂದು ನಮ್ಮ ಮನೆಯಲ್ಲಿ ಬಿಟ್ಟಾಗ, ಸಣ್ಣಂದಿನಲ್ಲೇ ತಾಯಿಯನ್ನು ಕಳೆದುಕೊಂಡ ನಮ್ಮಪ್ಪ ಆಗದು ಎನ್ನಲಿಲ್ಲ. ಪುಟ್ಟಕ್ಕ ನಮ್ಮ ಮನೆಯಲ್ಲಿ ಯಾವುದೇ ತಕರಾರು ಇಲ್ಲದೆ ಹೆಚ್ಚು ಕಡಿಮೆ ಹತ್ತು ವರ್ಷ ಇದ್ದರು. ಕೊನೆಗೂ ಹಠ ಹಿಡಿದು, ತನ್ನ ಗಂಡನ ಮನೆಗೆ ಹೋಗಿ ತನ್ನ ಕೊನೆಯ ದಿನಗಳನ್ನು ಕಳೆದ ನಮ್ಮಜ್ಜಿ ತುಂಬಾ ಮೌನವಾಗಿದ್ದು, ದಿನದ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದರು.
ಬೆಳ್ಳಗಿನ ಮೈ ಬಣ್ಣದ ನನ್ನ ಮಗಳು ಬೊಜ್ಜು ಬಾಯಗಲಿಸಿ ಮೊದಲ ನಗು ನಕ್ಕಾಗ ನಮ್ಮಜ್ಜಿಯ ನೆನಪಾಗಿ ಆಕೆಯನ್ನು 'ಪುಟ್ಟಕ್ಕ' ಎಂದು ಕರೆಯಲಾರಂಬಿಸಿದಾಗ ನನಗಾದ ಒಂದೇ ಬಯಕೆ ಆಕೆಯೂ ನಮ್ಮಜ್ಜಿಯಂತೆ ಸಹಜವಾದ '
Subscribe to:
Posts (Atom)